ಪಿಕ್ನೋಗೋನಿಡ -
ಆತ್ರ್ರಾಪೊಡ ವಿಭಾಗದ ಅರ್ಯಾಕ್ನಿಡ ವರ್ಗದಲ್ಲಿನ ಒಂದು ಗಣ. ಪ್ಯಾಂಟೊಪೊಡ, ಪೋಡಸೊಮೇಟ ಪರ್ಯಾಯ ನಾಮಗಳು. ಇದಕ್ಕೆ ಸೇರಿದ ಸಂಧಿಪದಿಗಳು ಚೇಳು ಮತ್ತು ಜೇಡಗಳಿಗೆ ಹತ್ತಿರ ಸಂಬಂಧಿಗಳು. ಇವು ಕಡಲ ವಾಸಿಗಳು. ಇವಕ್ಕೆ ಕಡಲ ಜೇಡಗಳೆಂಬ ಹೆಸರುಂಟು. ಎಲ್ಲ ಸಾಗರಗಳಲ್ಲಿ ಮತ್ತು ಕಡಲುಗಳಲ್ಲಿ ಕಂಡುಬಂದರೂ ಧ್ರುವ ಪ್ರದೇಶಗಳಲ್ಲಿ ಹೆಚ್ಚು ಸಾಮಾನ್ಯ. ಇವುಗಳ ದೇಹ ರಚನೆ ಜೇಡಗಳ ದೇಹ ರಚನೆಯಂತೆಯೇ ಇದೆ. ಇವುಗಳ ಮೊದಲ ಜೊತೆ ಉಪಾಂಗಗಳು ಅರ್ಯಾಕ್ನಿಡದ ಇತರ ಪ್ರಾಣಿಗಳಲ್ಲಿ ಕಂಡುಬರುವ ಕೆಲಿಸೆರಿಗಳನ್ನು ಹೆಚ್ಚಾಗಿ ಹೋಲುತ್ತವೆ. ಈ ಒಂದು ಹೋಲಿಕೆಯನ್ನು ಬಿಟ್ಟರೆ ಉಳಿದ ವಿಷಯಗಳಲ್ಲಿ ಪಿಕ್ನೊಗೋನಿಡಗಳು ಸಂಧಿಪದಿ ವಿಭಾಗದ ಇತರ ಗುಂಪುಗಳಿಂದ ಸ್ಟಷ್ಟವಾಗಿ ಬೇರೆಯಾಗಿವೆ. ಪುಟ್ಟ ದೇಹ, ಅತ್ಯಂತ ಉದ್ದ ಕಾಲುಗಳು ಮತ್ತು ಒಂದು ಜೊತೆ ಹೆಚ್ಚಿನ ಕಾಲುಗಳು ಇವುಗಳ ವಿಶೇಷ ಲಕ್ಷಣಗಳು. ಕಾಲುಗಳಲ್ಲಿ ಪಟೆಲ ಖಂಡ ಕಂಡುಬರುತ್ತದೆ. ಹೆಚ್ಚಿನ ಜೊತೆ ಕಾಲುಗಳು ಗಂಡುಪ್ರಾಣಿಗಳಲ್ಲಿ ಮೊಟ್ಟೆಗಳನ್ನು ಹೊರಲು ಸಹಾಯಕವಾಗಿವೆ. ಇವಕ್ಕೆ ಓವಿಜೆರ ಎಂದು ಹೆಸರು. ಇವು ನ್ಯೂಜಿóಲೆಂಡ್ ಪ್ರದೇಶದಲ್ಲಿ ಕಂಡುಬರುವ ಪ್ರೆಭೇದವನ್ನುಳಿದು ಉಳಿದೆಲ್ಲ ಪ್ರಭೇದಗಳ ಗಂಡುಗಳಲ್ಲಿ ಕಂಡುಬರುತ್ತವೆ. ಇವು ಸಾಮಾನ್ಯವಾಗಿ ಹೆಣ್ಣು ಪ್ರಾಣಿಗಳಲ್ಲಿ ಇಲ್ಲ. ಪಿಕ್ನೊಗೋನಿಡ ಗುಂಪಿನ ಪ್ರಾಣಿಗಳಲ್ಲಿ ಏಳು ಜೊತೆ ಉಪಾಂಗಗಳುಂಟು. ಮೊದಲನೆಯ ಜೋಡಿ ಉಪಾಂಗಗಳು ಮೋಟು ಹಾಗೂ ಕಾಲೇಟ್ ಮಾದರಿಯವು. ಪ್ರಬುದ್ಧ ಪ್ರಾಣಿಗಳಲ್ಲಿ ಇವು ಇಲ್ಲದಿರಲೂಬಹುದು. ಮುಂದಿನ ಎರಡು ಜೊತೆ ಉಪಾಂಗಗಳು ಸೂಕ್ಷ್ಮ ಗಾತ್ರದವು. ಅನೇಕ ವೇಳೆ ಪ್ರಬುದ್ಧ ಹೆಣ್ಣು ಪ್ರಾಣಿಗಳಲ್ಲಿ ಇವು ಕಾಣದೊರೆಯುವುದಿಲ್ಲ. ಎರಡನೆಯ ಜೊತೆ ಉಪಾಂಗಗಳು ಗಂಡುಗಳಲ್ಲಿ ಸಹ ಇಲ್ಲದಿರಬಹುದು. ವಾಸ್ತವವಾಗಿ ಮೂರನೆಯ ಜೊತೆ ಉಪಾಂಗಗಳೇ ಗಂಡು ಪ್ರಾಣಿಗಳಲ್ಲಿ ಮೊಟ್ಟೆಗಳನ್ನು ಹೊರಲು ಉಪಯುಕ್ತವಾಗುವುದು. ಕೊನೆಯ ನಾಲ್ಕು ಜೊತೆ ಉಪಾಂಗಗಳು ಎಲ್ಲ ಪ್ರಾಣಿಗಳಲ್ಲಿಯೂ ಇದ್ದು ನಡಿಗೆಯ ಅಂಗಗಳಾಗಿ ವರ್ತಿಸುತ್ತವೆ. ಕಡಲ ಜೇಡಗಳು ಸಾಮಾನ್ಯವಾಗಿ ಭಿನ್ನ ಲಿಂಗಿಗಳು. ಆದರೆ ಬ್ರಜಿóಲ್ ಪ್ರದೇಶದಲ್ಲಿ ಉಭಯ ಲಿಂಗಿ ಪ್ರಭೇದವೆಂದು ಇದೆಯೆಂದು ವರದಿಯಾಗಿದೆ. ಬಹುಪಾಲು ಪ್ರಭೇದಗಳಲ್ಲಿ ನಾಲ್ಕು ಜೊತೆ ಕಾಲುಗಳಿವೆಯಾದರೂ ಧ್ರುವ ಪ್ರದೇಶಗಳಲ್ಲಿ ಮತ್ತು ಕ್ಯಾರಿಬಿಯನ್ ವಲಯದಲ್ಲಿ ಇರುವ ಪ್ರಭೇದಗಳಲ್ಲಿ 5 ಜೊತೆ ಕಾಲುಗಳಿವೆ. ಹಾಗೆಯೇ ದಕ್ಷಿಣ ಧ್ರುವ ಪ್ರದೇಶದಲ್ಲಿ 6 ಜೊತೆ ಕಾಲುಗಳುಳ್ಳ ಒಂದು ಪ್ರಭೇದವುಂಟು.

ಪಿಕ್ನೊಗೋನಿಡ ಗುಂಪಿನ ಪ್ರಾಣಿಗಳ ದೇಹದಲ್ಲಿ ಮೂರು ಭಾಗಗಳುಂಟು : ಅಡಕವಾದ ಶಿರ ಭಾಗ, ಸ್ಪಷ್ಟವಾದ ಖಂಡ ವಿಂಗಡಣೆಯನ್ನು ತೋರುವ ವಕ್ಷಭಾಗ (ಇದರಲ್ಲಿ 3-5 ಖಂಡಗಳುಂಟು) ಮತ್ತು ಸಾಮಾನ್ಯವಾಗಿ ಸಣ್ಣದೂ ಬೆರಳಿನಾಕಾರದ್ದೂ ಆದ ಉದರ ಭಾಗ. ವಕ್ಷ ಭಾಗದ ಮೇಲೆ ಫಲಕವೊಂದಿದೆ. ಇದೇ ಹೊರಕಂಕಾಲ. ಗುದ ಉದರದ ಪಶ್ಚತುದಿಯಲ್ಲಿದೆ. ಆಹಾರವನ್ನು ಹೀರಲು ಅನುಕೂಲವಾಗುವಂತೆ ರೂಪಿತವಾಗಿರುವ ಮತ್ತು ಸೊಂಡಿಲು ಎಂದು ಕರೆಯಲಾಗುವ ವಿಶಿಷ್ಟ ಉಪಾಂಗವೊಂದರ ತುದಿಯಲ್ಲಿ ಬಾಯಿ ಇದೆ. ಸೊಂಡಿಲು ತ್ರಿಕೋನಾಕಾರದ್ದಾಗಿದ್ದು ಅನೇಕ ವೇಳೆ ದೇಹಕ್ಕಿಂತಲೂ ದೊಡ್ಡ ಗಾತ್ರದ್ದಾಗಿರುವುದೂ ಉಂಟು. ಶಿರ ಭಾಗದಲ್ಲಿ ಸಾಮಾನ್ಯವಾಗಿ ಮೂರು ಜೊತೆ ಉಪಾಂಗಗಳಿವೆ. ಮೊದಲನೆಯ ಜೊತೆಯೇ ಕೆಲಿಸೆರಿ. ಇದರ ತುದಿಯಲ್ಲಿ ಇಕ್ಕಳದ ಕೀಲೇಟ್ ರಚನೆ ಇರಬಹುದು. ಅಥವಾ ಇಲ್ಲದಿರಬಹುದು. ಎರಡನೆಯ ಜೊತೆಯೇ ಸಂವೇದಕ ಪ್ಯಾಲ್ಪಿಗಳು. ಇವು ಸೊಂಡಿಲಿನ ಇಕ್ಕೆಡೆಗಳಲ್ಲಿ ಸ್ಥಿತವಾಗಿದ್ದು ಅದಕ್ಕೆ ಆಧಾರವಾಗಿರುತ್ತವೆ. ಓವಜೆರ ಕಾಲುಗಳು ದೇಹದ ತಳಭಾಗದಿಂದ ಮೂಡುತ್ತವೆ. ಶಿರ ಭಾಗದಲ್ಲಿನ ಗುಬುಟುಗಳ ತುದಿಯಲ್ಲಿ ನಾಲ್ಕು ಸರಳ ಕಣ್ಣುಗಳಿವೆ. ಈ ಗುಂಪಿನ ಕಡಲತಡಿಯ ಪ್ರಾಣಿಗಳ ಜೀರ್ಣಾಂಗ ಮತ್ತು ಪ್ರಜನನಾಂಗಗಳು ಕವಲೊಡೆದು ಕಾಲುಗಳೊಳಕ್ಕೂ ಚಾಚಿಕೊಂಡಿರುವುವು. ಜನನ ರಂಧ್ರಗಳು ಸಾಮಾನ್ಯವಾಗಿ ದೇಹದ ತಳ ಭಾಗದಲ್ಲಿದ್ದು ಕೊನೆಯ ಜೊತೆಯ ಕಾಲುಗಳ 2 ನೆಯ ಖಂಡದ ಬಳಿ ಹೊರಕ್ಕೆ ತೆರೆಯುತ್ತವೆ. ಕೆಲವೊಮ್ಮೆ ಇತರ ಕಾಲುಗಳ ಬುಡದಲ್ಲಿಯೂ ತೆರೆಯಬಹುದು. ಜೀವನ ಚಕ್ರದಲ್ಲಿ ಲಾರ್ವ ಅವಸ್ಥೆ ಕಂಡುಬರುತ್ತದೆ. ಲಾರ್ವ ಸ್ಥಿತಿಯ ಪ್ರಥಮ ಹಂತಗಳಲ್ಲಿ ದೇಹದಲ್ಲಿ ಖಂಡ ವಿಂಗಡಣೆ ಕಾಣಬರುವುದಿಲ್ಲ. ಆಗ ಕೇವಲ ಮೂರು ಜೊತೆ ಉಪಾಂಗಗಳಿರುತ್ತವೆ.

ಲಾರ್ವಗಳು ಹೈಡ್ರಾಯಿಡ್ ಅಥವಾ ಪಾಲಿಪ್‍ಗಳಿಗೆ ಅಂಟಿಕೊಂಡು ಅವುಗಳ ಕೋಶ ದ್ರವ್ಯದಲ್ಲಿ ಗಂಡುಗಳಾಗುತ್ತವೆ. ಅಥವಾ ಮೆಡುಸಾಗಳ ದೇಹದೊಳಕ್ಕೆ ಅತಿಕ್ರಮಿಸಿ ಬೆಳೆಯಬಹುದು. ಜಪಾನಿನ ಒಂದು ಪ್ರಭೇದದ ಲಾರ್ವಗಳು ಕ್ಲ್ಯಾಮ್‍ಗಳ ಮ್ಯಾಂಟಲ್ ಕುಹರದಲ್ಲಿ ಸೇರಿ ಪರತಂತ್ರ ಜೀವಿಗಳಾಗಿ ವಾಸಿಸುತ್ತವೆ.
(ಎಚ್.ಎಚ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ